ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸಿದ್ದಾಂತ ಪ್ರತಿಯೊಬ್ಬರ ಅನುಭವಕ್ಕೆ ಸಿಲುಕುವಂಥದ್ದು. ಅದಕ್ಕಾಗಿಯೇ ಬುದ್ದಿಗೆ ಸರಿ ಎನಿಸುವಂಥದ್ದು. ಮನಸ್ಸಿಗೆ ಹಿಡಿಸುವಂಥದ್ದು. ಅವರ ಚಿಂತನೆಗಳಲ್ಲಿ ಪೂರ್ವಾಗ್ರಹಗಳಿಲ್ಲ. ಉಪದೇಶಗಳಲ್ಲಿ ಮೋಹಕತೆ ಇಲ್ಲ.

ಅವರ ಗ್ರಂಥಗಳು ಕಲ್ಪನಾವಿಲಾಸದ ಕಥೆ ಕಾದಂಬರಿಗಳಲ್ಲ. ಮನುಕುಲಕ್ಕೆ ಅಭ್ಯುನ್ನತಿಯ ಮಾರ್ಗವನ್ನು ತೆರೆದು ತೋರಿಸುವ ಅಮೂಲ್ಯ ಕೃತಿಗಳು. ಲೌಕಿಕ ಜೀವನದ ಪ್ರತಿಯೊಂದು ಸಮಸ್ಯೆಗೂ ಪರಿಹಾರದ ಉಪಾಯವನ್ನು ತಿಳಿಸುವ ಕಾರುಣ್ಯದ ಉಪದೇಶಗಳು.

ಭಗವಂತನ, ದೇವತೆಗಳ, ಜೀವರ, ಪ್ರಪಂಚದ ಕುರಿತು ಸಮಗ್ರ ಪ್ರಮೇಯಗಳನ್ನು ನಿರ್ದುಷ್ಟವಾಗಿ ನಿಖರವಾಗಿ ಪ್ರತಿಪಾದಿಸಿದ ಪರಿಶುದ್ದ ಸಿದ್ದಾಂತ ಶ್ರೀಮದಾಚಾರ್ಯರ ತತ್ವವಾದ.

ಅನಿವಾರ್ಯ ಲೌಕಿಕ ಕಾರಣಗಳಿಂದಾಗಿ ಶ್ರೀಮದಾಚಾರ್ಯರಿಂದ, ಅವರ ಅಮೂಲ್ಯ ಸಿದ್ದಾಂತದಿಂದ, ಮಹೋನ್ನತ ಗುರುಪರಂಪರೆಯಿಂದ ದೂರವಾಗಿರುವ ಇವತ್ತಿನ ಸಮಾಜ ವಿಶೇಷವಾಗಿ ಮಾಧ್ವ ಯುವಜನತೆ ಶಾಶ್ವತವಾಗಿ ಈ ತತ್ವಜ್ಞಾನದಿಂದ ವಂಚಿತರಾಗಿಬಿಡಬಾರದು ಎಂಬ ಕಾರಣಕ್ಕೆ ಮನೆಮನೆಗೆ ಮಧ್ವಶಾಸ್ತ್ರ ಮುಟ್ಟಿಸುವ, ನೀವಿದ್ದಲ್ಲಿಗೇ ಆಚಾರ್ಯರ ಉಪದೇಶಗಳನ್ನು ತಲುಪಿಸುವ ಪವಿತ್ರ ಕಾರ್ಯವನ್ನು ವ್ಯಾಸವಿಜ್ಞಾನಪೀಠಂ ಆರಂಭಿಸಿದೆ.

ಶ್ರೀಮದಾಚಾರ್ಯರ ಸರ್ವಮೂಲದ ಸವಿಯನ್ನುಣುವ ಅಪೇಕ್ಷೆ ನಿಮಗಿದ್ದಲ್ಲಿ ಸನಾತನ ಮಾರ್ಗದಲ್ಲಿ ನಡೆಯುವ ಆಕಾಂಕ್ಷೆ ಒಡಮೂಡಿದ್ದಲ್ಲಿ ಈ ವಿಚಾರತಾಣಕ್ಕೆ ನಿಮಗೆ ಸುಸ್ವಾಗತ.

- ವಿಷ್ಣುದಾಸ ನಾಗೇಂದ್ರಾಚಾರ್ಯ